ದಲಿತರು ಮಾಡಿ ಕೊಟ್ಟ ಕಬ್ಬಿನ ಹಾಲು ಕುಡಿಯಬೇಕೆ..? ಎಂದು ಪ್ರಶ್ನಿಸಿ ಕಬ್ಬಿನ ಅಂಗಡಿ ಧ್ವಂಸ, ಹಲ್ಲೆ
ದಲಿತರ ಕೈಲಿ ಕಬ್ಬಿನ ಹಾಲು ಕುಡಿಸುತ್ತೀಯಾ ಎಂದು ಜಾತಿ ನಿಂದನೆ ಮಾಡಿ ಕಬ್ಬಿನ ಗಾಡಿಯನ್ನು ಧ್ವಂಸ ಗೊಳಿಸಿ ಅಪ್ಪ, ಮಗನಿಗೆ ಹಲ್ಲೆನಡೆಸಿರುವ ಅಮಾನವೀಯ ಘಟನೆ ಅರಕಲಗೂಡು ತಾಲೂಕು, ರುದ್ರಾಪಟ್ಟಣ ಸಮೀಪ ಭಾನುವಾರ ನಡೆದಿದೆ.
ಚಂದ್ರು ಎಂಬುವರು ಗಂಗೂರು ಸರ್ಕಾರಿ ಆಸ್ಪತ್ರೆ ರಸ್ತೆ ಬದಿ ತಳ್ಳುವ ಗಾಡಿಯ ಕಬ್ಬಿನ ಹಾಲಿನ ಅಂಗಡಿ ಹಾಕಿಕೊಂಡು ಕಳೆದ ಒಂದೂವರೆ ವರ್ಷದಿಂದ ವ್ಯಾಪಾರ ಮಾಡುತ್ತಾ ಜೀವನ ನಡೆಸುತ್ತಿದ್ದಾರೆ.
ಈ ಮದ್ಯೆ ರಸ್ತೆ ಬದಿ ತೋಟದ ಮಾಲೀಕ ರಾಜೇಶ್ ಮತ್ತು ಸುನೀಲ್ ಎಂಬುವರು ಇದು ನಮ್ಮ ಪಕ್ಕದ ತೋಟದಲ್ಲಿದೆ ನಾನು ಎಳನೀರು ಹಾಕುತ್ತೇನೆ. ಬೇರೆ ಕಡೆ ಹಾಕಿಕೋ ಎಂದು ಹೇಳಿದ್ದಕ್ಕೆ ಸ್ವಲ್ಪ ದೂರದಲ್ಲಿ ಗಾಡಿ ಹಾಕಿದ್ದಾರೆ.
ಆದರೆ ಮರುದಿನ ಮತ್ತೊಬ್ಬ ಮುಸ್ಲಿಂ ನನ್ನು ಕರೆತಂದ ಸುನೀಲ್ ಬೇರೊಂದು ಕಬ್ಬಿನ ಗಾಡಿ ಹಾಕಿಸಿದ್ದಾರೆ.
ಯಾಕೆ ಹೀಗೆ ಮಾಡಿದ್ದೀರಿ ಎಂದು ಕೇಳಿದಾಗ ‘ ನಾವೆಲ್ಲಾ ನೀವು ಮಾಡಿದ ಕಬ್ಬಿನ ಹಾಲು ಕುಡಿಯಬೇಕಾ’ ಎಂದು ಹೇಳಿ ಜಾತಿ ನಿಂಧನೆ ಮಾಡಿ ಹಲ್ಲೆ ನಡೆಸಿದರು ಎಂದು ಚಂದ್ರು ಭೀಮ ವಿಜಯಕ್ಕೆ ತಿಳಿಸಿದ್ದಾರೆ.
ಅಲ್ಲದೇ ಕೂಡಲೇ ಕಬ್ಬಿನ ಗಾಡಿ ತೆಗೆಯಬೇಕೆಂದು ಬೆದರಿಸಿದ ನಾಲ್ಕೈದು ಜನರ ತಂಡ ಕಬ್ಬನ್ನು ಎಸೆದು ಗಾಡಿಯನ್ನು ಧ್ವಂಸಗೊಳಿಸಿದೆ. ವಿಚಾರ ತಿಳಿದ ಸ್ಥಳೀಯ ಸಂಘಟನೆಗಳು ಅಪ್ಪ ಮಗನನ್ನು ರಕ್ಷಿಸಿ ಠಾಣೆಗೆ ಕರೆದೊಯ್ದಿದ್ದಾರೆ. ಈ ಸಂಬಂಧ ದೂರು ನೀಡಲಾಗುತ್ತಿದೆ ಎಂದು ಸಂತ್ರಸ್ತ ಚಂದ್ರು ಆತನ ಮಗ ಹಾಗೂ ದಲಿತ ಮುಖಂಡ ವಿನೋದ್ ಅಂಬೇಡ್ಕರ್ ಪತ್ರಿಕೆಗೆ ತಿಳಿಸಿದ್ದಾರೆ. ರಾಜೇಶ್ ಮತ್ತು ಸುನೀಲ್, ತಂದಿಮ್ ಪಾಷಾ ಹಾಗೂ ಹಲ್ಲೆ ನಡೆಸಿದವರ ಮೇಲೆ ದೂರು ದಾಖಲಿಸಲಾಗುತ್ತಿದ್ದು ನ್ಯಾಯ ಕೊಡಿಸಬೇಕೆಂದು ಮನವಿ ಮಾಡಿದ್ದಾರೆ.
– ನಾಗರಾಜ್ ಹೆತ್ತೂರು