ಯುಗ ಪ್ರವರ್ತಕನೆಂದು ಕನ್ನಡಿಗರಿಂದ ಗೌರವಕ್ಕೆ ಪಾತ್ರನಾದ ಆದಿಕವಿ ಪಂಪ ಕನ್ನಡದ ರತ್ನತ್ರಯರಲ್ಲಿ ಒಬ್ಬರು.. ಈತನ ಕಾಲ(ಕ್ರಿ.ಶ.೯೦೨ – ೯೫೦)ವನ್ನು ಪಂಪ ಯುಗವೆಂದೇ ಬಣ್ಣಿಸಲಾಗಿದೆ. “ಆರಂಕುಸವಿಟ್ಟೊಡಂ ನೆನೆವುದೆನ್ನ ಮನಂ ವನವಾಸಿ ದೇಶಮಂ” (ಯಾರು ಬೇಡವೆಂದು ತಡೆದು, ಅಂಕುಶದಿಂದ ತಿವಿದರೂ, ನನ್ನ ಮನಸ್ಸು ಬನವಾಸಿ ದೇಶವನ್ನು ನೆನೆಯುವುದು) ಎಂದು ತನ್ನ ಕೃತಿಯಲ್ಲಿ ಹೇಳಿರುವ ಪಂಪ ಕನ್ನಡ ನಾಡಿನ ಬಗ್ಗೆ ತನ್ನ ನಾಡಪ್ರೇಮವನ್ನು ವ್ಯಕ್ತಪಡಿಸಿದ್ದಾನೆ. ಈತನ ತಂದೆ ಭೀಮಪ್ಪಯ್ಯ, ತಾಯಿ ಅಬ್ಬಣಬ್ಬೆ ಪಂಪನ ಜನ್ಮಸ್ಥಳ ಈತನ ತಾಯಿಯ ತವರೂರಾದ ಅಣ್ಣಿಗೇರಿ ಎಂದು ವಿದ್ವಾಂಸರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.’ಆದಿಪುರಾಣ’, ‘ವಿಕ್ರಮಾರ್ಜುನ ವಿಜಯ’ ದಂತ ಶ್ರೇಷ್ಠ ಕೃತಿಗಳನ್ನು ರಚಿಸಿದ ಪಂಪನ ಹುಟ್ಟೂರಾದ ಅಣ್ಣಿಗೇರಿಗೆ ನಾವು ಭೇಟಿ ನೀಡಿದಾಗ ದೊರೆತ ಮಾಹಿತಿ, ಅದ್ಬುತ ಅನುಭವನನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ.
‘ಅಣ್ಣಿಗೇರಿ ದೇಶಪಾಂಡೆ ಮನೆತನದ ಜೋಯಿಸಿಂಗರ ಮಗಳು ಅಬ್ಬಣಬ್ಬೆಯೇ ಪಂಪನ ತಾಯಿ. ಅಜ್ಜಿಯ ಮನೆಯಲ್ಲಿಯೇ ಪಂಪ ಹುಟ್ಟಿದ್ದು’ ಎಂಬ ಮಾಹಿತಿ ಪಂಪನ ಸಹೋದರ ಜಿನವಲ್ಲಭನ ಶಾಸನದಲ್ಲಿದೆ. ಈ ಶಾಸನವು ಆಂಧ್ರಪ್ರದೇಶದ ಕರೀಂನಗರದ ಕುರ್ಕಿಯಾಲ್ ಎಂಬ ಗುಡ್ಡದಲ್ಲಿ ಈಗಲೂ ಇದೆ. ಇದನ್ನು 1961ರಲ್ಲಿ ಮೊದಲು ಪತ್ತೆ ಹಚ್ಚಿದವರು ಕಲಬುರ್ಗಿ ಹಾಗೂ ಹಿರೇಮಠ. ಹೀಗೆ ನಮ್ಮ ಅಣ್ಣಿಗೇರಿಯ ಪಂಪ ಸಿಕ್ಕಿದ. ಅಣ್ಣಿಗೇರಿಯೇ ಪಂಪ ಹುಟ್ಟಿದ ಊರು ಎಂಬುದು ಖಚಿತವಾಗಿ ಹೋಯಿತು.
‘ಪಸರಿಪ ಕನ್ನಡಕ್ಕೊಡೆಯನೊರ್ವನೆ ಸತ್ಕವಿ ಪಂಪನಾವಗಂ’ ಎಂದು ಕವಿ ನಾಗರಾಜನಿಂದ ಹೊಗಳಿಸಿಕೊಂಡಿರುವ ಪಂಪ ಗದ್ಯ ಮತ್ತು ಪದ್ಯಗಳ ಮಿಶ್ರಣವಾದ ಚಂಪೂ ಶೈಲಿಯಲ್ಲಿ ಕೃತಿಗಳನ್ನು ರಚಿಸಿದ್ದಾನೆ. ಪ್ರತಿ ಪದ್ಯವನ್ನೂ ಆಧುನಿಕ ಗದ್ಯದಲ್ಲಿ ವಿವರಿಸದಿದ್ದರೆ ಅರ್ಥ ಮಾಡಿಕೊಳ್ಳಲು ಕಷ್ಟವಾಗುತ್ತದೆ.. ಈ ಕಷ್ಟ ನಿವಾರಣೆಗೆ ಕಳೆದ ಶತಮಾನದಿಂದ ಪ್ರಯತ್ನಗಳು ನಡೆಯುತ್ತಿವೆ. ಮುಳಿಯ ತಿಮ್ಮಪ್ಪಯ್ಯ ಅವರ ನಾಡೋಜ ಪಂಪ, ಡಾ. ಡಿ.ಎಲ್. ನರಸಿಂಹಾಚಾರ್ಯರ ಪಂಪಭಾರತ ದೀಪಿಕೆ, ಕೆ. ವೆಂಕಟರಾಮಪ್ಪ, ತೀ.ನಂ.ಶ್ರೀಕಂಠಯ್ಯ, ಎಲ್. ಬಸವರಾಜು, ಎನ್. ಅನಂತರಂಗಾಚಾರ್, ಎಚ್. ವಿ. ಶ್ರೀನಿವಾಸ ಶರ್ಮಾ ಅವರ ಗದ್ಯಾನುವಾದಗಳು ಪಂಪನ ಪದ್ಯಗಳನ್ನು ಅರ್ಥ ಮಾಡಿಕೊಳ್ಳಲು ನೆರವಾಗುತ್ತವೆ… ‘ಆದಿಪುರಾಣ’ ವು ಪ್ರಥಮ ಜೈನ ತೀರ್ಥಂಕರ ವೃಷಭನಾಥನ ಕತೆಯಾದರೆ, ವಿಕ್ರಮಾರ್ಜುನ ವಿಜಯ (ಪಂಪಭಾರತ)ವು ವ್ಯಾಸರ ಮಹಾಭಾರತ ಕತೆಯನ್ನು ಪ್ರಾದೇಶಿಕ ಭಾಷೆಯಲ್ಲಿ, ದೇಶಿಯ ಗುಣಗಳನ್ನು ಮೇಳವಿಸಿ ಬರೆದ ಕೃತಿ. ವೆಂಗಿ ಚಾಲುಕ್ಯ ವಂಶದ ಇಮ್ಮಡಿ ಅರಿಕೇಸರಿಯ ಆಸ್ಥಾನ ಕವಿಯಾಗಿದ್ದ ಪಂಪನು ತನ್ನ ವಿಕ್ರಮಾರ್ಜುನ ವಿಜಯ ಕೃತಿಯಲ್ಲಿ ರಾಜ ಅರಿಕೇಸರಿಯನ್ನು ಮಹಾಭಾರತದ ಅರ್ಜುನನಿಗೆ ಹೋಲಿಸಿ ಹೊಗಳಿದ್ದಾನೆ.ಇನ್ನು ಹಿರಿಯ ಸಂಶೋಧಕ ಡಾ.ಎಂ.ಎಂ.ಕಲ್ಬುರ್ಗಿ ಅವರ ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ ಕೃತಿ, ಮಾರ್ಗ-೪ ಸಂಪುಟಗಳು ಪಂಪನ ಬಗ್ಗೆ ತಿಳಿಯಲು ಅನುಕೂಲವಾಗಿವೆ.
‘ಪಂಪ ಅಣ್ಣಿಗೇರಿಯಲ್ಲಿ ಹುಟ್ಟಿದ್ದರೂ, ಈ ಭಾಗದಲ್ಲಿ ಬಾಳಿ ಬದುಕಿಲ್ಲ ಎಂಬ ತೀರ್ಮಾನಕ್ಕೆ ಬರಲಾಗಿದೆ’ ಎಂದು ಹೇಳುತ್ತಾರೆ ಹರ್ಲಾಪುರ. ಪಂಪನ ಕಾಲದಲ್ಲಿ ಅಣ್ಣಿಗೇರಿ ಒಂದು ಪ್ರಾಂತ್ಯವಾಗಿತ್ತು. ಇದು 300 ಗ್ರಾಮಗಳನ್ನು ಒಳಗೊಂಡಿತ್ತು. ಈ ಗ್ರಾಮಗಳಲ್ಲಿ ಈಗಿನ ಬನವಾಸಿಯೂ ಸೇರಿತ್ತು. ಹೀಗಾಗಿಯೇ ಪಂಪ ಬನವಾಸಿ ಹಾಡಿ ಹೊಗಳಲು ಕಾರಣ. ಆತ ಬದುಕಿದ್ದು, ಆಂಧ್ರಪ್ರದೇಶದಲ್ಲಿದ್ದ ಅರಿಕೇಸರಿಯ ಆಸ್ಥಾನದಲ್ಲಿ. ಆದರೂ ಬನವಾಸಿಯನ್ನು ಹಾಡಿ ಹೊಗಳಿದ. ಎಷ್ಟೆ ಆಗಲಿ ಅಜ್ಜಿಯ ಊರು, ಯಾವ ಮೊಮ್ಮಕ್ಕಳಿಗೆ ಚೆಂದ ಕಾಣುವುದಿಲ್ಲ, ನೀವೆ ಹೇಳಿ.?
ಇನ್ನು ಅಣ್ಣಿಗೇರಿಯ ಬಗ್ಗೆ ಹೇಳುವುದಾದರೆ ಅಣ್ಣಿಗ ಎಂಬಾತ ಈ ಊರಿನಲ್ಲಿ ಕೆರೆ ಕಟ್ಟಿಸಿದ್ದರಿಂದ ಅಣ್ಣಿಗೇರಿ ಎಂಬ ಹೆಸರು ಬಂದಿದೆ ಎಂಬುದು ಪ್ರತೀತಿ. ಅಣ್ಣಿಗೇರಿ ಎಂದರೆ ‘ಈ ಊರೊಳಗೆ ಮೊಣಕಾಲು ಮಟ್ಟ ಎಣ್ಣೆ’ ಎಂಬ ನಾಣ್ನುಡಿ ಇತ್ತು. ಗೋಧಿ, ಕುಸುಬೆಯನ್ನು ಇಲ್ಲಿ ಹೆಚ್ಚಾಗಿ ಬೆಳೆಯುತ್ತಿದ್ದರಿಂದ ಈ ಊರೊಳಗೆ ಬಹಳ ಗಾಣಗಳು ತಿರುಗುತ್ತಿದ್ದವು. ಕಲಕ್ರಮೇಣ ಯಂತ್ರಗಳಿಂದ ತೆಗೆಯಲಾಗುವುದು ನೆಲಗಡಲೆ ಎಣ್ಣೆಯೊಂದಿಗೆ ಪೈಪೋಟಿ ನಡೆಸಲಾಗದೆ ಗಾಣಗಳು ಮೂಲೆಗುಂಪಾಗಿವೆ. ಅಣ್ಣಿಗೇರಿಯು ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿಗೆ ಸೇರಿದ್ದು ಗದಗ ಜಿಲ್ಲೆಗೆ ಸಮೀಪದಲ್ಲಿದೆ.ರಾಜ್ಯ ಪುನರ್ ವಿಂಗಡಣೆಗೂ ಮೊದಲು ೧೯೫೭ ನೆಯ ನವೆಂಬರಗೂ ಮೊದಲು ಇಡೀ ಮುಂಬೈ ರಾಜ್ಯದಲ್ಲಿಯೇ ಅತಿ ಹೆಚ್ಚು ಭೂಕಂದಾಯವನ್ನು ಕೊಡುವ ಮೊದಲನೆಯ ಹಳ್ಳಿಯಾಗಿತ್ತು.
ಅದೊಂದು ದೊಡ್ಡಗೇಟ್ ಅದನ್ನು ದಾಟಿ ಮುಂದೆ ಹೋದರೆ ವಾಡೆಯ ಮುಂಬಾಗಿಲು. ಬಾಗಿಲು ತೆಗೆದು, ಒಳಗೆ ಹೆಜ್ಜೆ ಇಡುತ್ತಿದ್ದಂತೆ, ದೊಡ್ಡ ಹಜಾರ. ಅಲ್ಲಿ ನಿಂತರೆ ಮನಸ್ಸಿನಲ್ಲಿ ಎತ್ತ ಕಡೆ ಹೋಗಬೇಕು, ಏನನ್ನು ನೋಡಬೇಕೆಂಬ ಗೊಂದಲ ಹುಟ್ಟುತ್ತದೆ. ಆ ಕಡೆ ಹೋಗೋದಾ, ಈ ಕಡೆ ಹೋಗೋದಾ ಎಂದು ಮನಸ್ಸು ಉಯ್ಯಾಲೆಯಂತಾಡುತ್ತದೆ. “ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ”ಎಂದು ಹೇಳಿದ ಆದಿಕವಿ ಪಂಪ ಹುಟ್ಟಿದ ಮನೆ ಇದು. ಧಾರವಾಡ ಜಿಲ್ಲೆ ಹುಬ್ಬಳ್ಳಿ ತಾಲ್ಲೂಕಿನ ಅಣ್ಣಿಗೇರಿಯಲ್ಲಿರುವ ಈ ಮನೆಯನ್ನು, ಗ್ರಾಮದ ಜನರು ಪಂಪನ ವಾಡೆ ಎಂದೇ ಕರೆಯುತ್ತಾರೆ. ಆ ಮನೆಗೆ ‘ದೇಶಪಾಂಡೆಯವರ ವಾಡೆ’ ಎಂಬ ಹೆಸರೂ ಇದೆ.
ಪಂಪ ಈಗೀರುವ ವಾಡೆಯಲ್ಲಿ ಹುಟ್ಟುದವನಲ್ಲ.ಅವನ ಕಾಲಕ್ಕೆ ಮಣ್ಣಿನ ಒಂದು ದೊಡ್ಡ ಮಾಳಿಗೆ ಮನೆಯಿತ್ತಂತೆ.ಇವತ್ತು ಈ ವಾಡೆ 5 ಎಕರೆ ಎರಡು ಕುಂಟೆ ಜಾಗದಷ್ಟು ಇದೆ. ಈ ಪ್ರದೇಶದಲ್ಲಿ ಮೂರು ಎಕರೆಯಷ್ಟು ವಾಡೆಯ ಕಟ್ಟಡ ಆವರಿಸಿದೆ! ಆರೇಳು ಅಡಿ ಅಗಲದ ದಪ್ಪ–ದಪ್ಪ ಗೋಡೆಗಳು, ಮರದ ಬೃಹತ್ ಗಾತ್ರದ ಕಂಬಗಳ ಸಾಲುಗಳು, ಗೋಡೆಯ ಮೇಲಿರುವ ಪಂಪನ ವಾರಸುದಾರರ ಚಿತ್ರಗಳು ಗಮನ ಸೆಳೆಯುತ್ತವೆ. ಮೊದಲ ಹಜಾರದಲ್ಲಿರುವ ಎತ್ತರದ ಕಂಬಗಳ ಸಾಲುಗಳನ್ನು ಕಂಡಾಗ, ‘ಇಷ್ಟೆತ್ತರವಿದ್ದಾವೆಯೇ ಮರದ ಕಂಬಗಳು’ ಎಂದು ಉದ್ಗರಿಸುವಂತಾಗುತ್ತದೆ. ಕಂಬಗಳ ಸಾಲು ದಾಟಿ, ವಾಡೆಯ ಗೋಡೆಗಳತ್ತ ನೋಟ ಹರಿಸಿದರೆ, ತರಹೇವಾರಿ ಚಿತ್ರಗಳ ಜತೆಗೆ, ಬ್ರಿಟಿಷರ ಕಾಲದ ಕನ್ನಡಿಯೊಂದು ಗಮನ ಸೆಳೆಯುತ್ತದೆ.
ಪಂಪನ ವಾಡೆಯ ಹೊರಭಾಗದ ದೃಶ್ಯ ಭಾವಚಿತ್ರ ಬಿಟ್ಟರೆ ಬೇರೇನೂ ಇಲ್ಲ ಪಂಪನಿಗೆ ಸಂಬಂಧಿಸಿದ ಯಾವ ವಸ್ತುಗಳು ಈಗ ಇಲ್ಲಿ ಇಲ್ಲ. ಮೊದಲು ಸಿಗುವ ಹಜಾರದಲ್ಲಿ ಪಂಪನ ಭಾವಚಿತ್ರ ಹಾಕಿರುವುದು ಬಿಟ್ಟರೆ ಬೇರೇನು ವಸ್ತುಗಳಿಲ್ಲ. ಹಜಾರದ ಪಕ್ಕದಲ್ಲಿರುವ ಕೋಣೆ ಪ್ರವೇಶಿಸಿದರೆ ಹಲವು ಕಂಬಗಳ ದನದ ಕೊಟ್ಟಿಗೆ ಕಾಣುತ್ತದೆ. ಈ ಕೊಟ್ಟಿಗೆಗೆ ಅಂಟಿಕೊಂಡಂತೆ, ರಾಗಿ, ಅಕ್ಕಿ ಬೀಸುವ ದೊಡ್ಡದಾದ ಕೊಠಡಿ ಇದೆ. ಆರೇಳು ಬೀಸುವ ಕಲ್ಲುಗಳಿವೆ. ಪಕ್ಕದಲ್ಲಿ ಕುದುರೆ ಕಟ್ಟುತ್ತಿದ್ದ ಲಾಯವೂ ಇದೆ.
ವಾಡೆಯಲ್ಲಿ ವಿಶಾಲವಾದ ಹತ್ತು ಕೊಠಡಿಗಳಿವೆ. ವಾಡೆಯ ಅಟ್ಟಕ್ಕೆ ಏರಲು ಹಜಾರದ ಮಧ್ಯದಿಂದ ಹದಿನಾಲ್ಕು ಕಡೆಗಳಲ್ಲಿ ಮೆಟ್ಟಿಲ ಬಾಗಿಲುಗಳಿವೆ. ವಾಡೆಯ ಹಜಾರ ಇನ್ನೆಷ್ಟು ಅಗಲವಿರಬಹುದು ಎಂಬುದನ್ನು ನೀವೇ ಊಹಿಸಿಕೊಳ್ಳಿ! ಮಹಡಿಯಲ್ಲಿ ನಿಂತು ಹೊರಾಂಗಣವನ್ನು ನೋಡಲು ಇರುವ ಬಾಲ್ಕನಿ ರೀತಿಯ ಕಿಟಕಿಗಳು ಗಮನ ಸೆಳೆಯುತ್ತವೆ. ಕುಟುಂಬಕ್ಕೆ ಸೇರಿದ, ಹಿರಿಯರಿಗೆ ಸಂಬಂಧಿಸಿದ ಅನೇಕ ಪರಿಕರಗಳನ್ನು ನೋಡಬಹುದು. ದೊಡ್ಡದೊಡ್ಡ ಮರದ ದಿಮ್ಮಿಗಳನ್ನು ಬಳಸಿ ವಾಡೆ ಕಟ್ಟಿರುವುದರಿಂದ ವಿನ್ಯಾಸವೇ ಮನಮೋಹಕವಾಗಿದೆ.
ಹಳೆಯದಾದ ಕಾರಣ ವಾಡೆ ತನ್ನ ಚೈತನ್ಯ ಕಳೆದುಕೊಂಡಂತೆ ಕಾಣುತ್ತದೆ. ಕೆಲವು ಕೊಠಡಿಗಳಿಗೆ ಬೀಗ ಹಾಕಲಾಗಿದೆ. ಪಂಪನ ಮನೆತನದ ಭೀಮಪ್ಪಯ್ಯ ಚಂದ್ರಪ್ಪಯ್ಯ ರಾವ್ ಸಾಹೇಬ ದೇಶಪಾಂಡೆ (ಒಂದೇ ಹೆಸರು) ಹಾಗೂ ಅವರ ಸಹೋದರರು ಈ ಮನೆಯಲ್ಲಿ ಈಗ ವಾಸವಿಲ್ಲ. ಊರಿಗೆ ಬಂದಾಗ ವಾಡೆಯಲ್ಲೇ ಉಳಿಯುತ್ತಾರೆ. ಹೋಟೆಲ್ ಉದ್ಯಮ ನಡೆಸಿಕೊಂಡು ಕೊಲ್ಲಾಪುರದಲ್ಲಿ ಇದ್ದಾರೆ. ಹೀಗಾಗಿ ಮನೆಯ ನಿರ್ವಹಣೆಗೆ ಇಬ್ಬರನ್ನು ನೇಮಕ ಮಾಡಿದ್ದಾರೆ. ಇವರಿಂದ ಅಲ್ಪಸ್ವಲ್ಪ ಮಾಹಿತಿ ಪಡೆಯಬಹುದು.
ಉತ್ತರ ಕರ್ನಾಟಕದ ಭಾಗದಲ್ಲಿ ರಾಜರ ಸಾಮಂತರಾಗಿ ಕುಲಕರ್ಣಿ, ದೇಶಪಾಂಡೆ, ದೇಸಾಯಿಗಳು ಆಳುತ್ತಿದ್ದರು. ಈ ಮನೆತನದವರು ವಾಡೆಗಳಲ್ಲಿ (ಕೋಟೆಗಳಂತ ಮನೆಗಳು) ವಾಸಿಸುತ್ತಿದ್ದರು. ಈಗಲೂ ಈ ಭಾಗದ ಹಲವು ಕಡೆಗಳಲ್ಲಿ ಇಂಥ ವಾಡೆಗಳನ್ನು ಕಾಣಬಹುದು.