ಹಿಂದು ಸಂಘಟನೆಯಿಂದ ಬನಹಟ್ಟಿ ಬಂದ್ ಯಶಸ್ವಿ
ಬನಹಟ್ಟಿ ಪಟ್ಟಣದಾದ್ಯಂತ ಎರಡು ದಿನ 144 ನಿಷೇದಾಜ್ಞೆ ಜಾರಿ
ಹಿಜಾಬ್-ಕೇಸರಿ ಶಾಲು ವಿವಾದ ತಾರಕಕ್ಕೇರಿದ್ದು, ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಬಾಗಲಕೋಟೆ ಜಿಲ್ಲೆಯ ಬನಹಟ್ಟಿ
ನಗರದಲ್ಲಿ ಕಲಂ 144 ಅಡಿ ನಿಷೇದಾಜ್ಞೆ ಹೇರಿ ಕಂದಾಯ ಇಲಾಖೆ ಆದೇಶಿಸಿದೆ.
ಮಂಗಳವಾರ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಹಾಗು ಕೇಸರಿ ಶಾಲು ಧರಿಸುವ ಬಗ್ಗೆ ನಡೆಯುತ್ತಿರುವ ವಿವಾದವು ಬೇರೆ ಬೇರೆ ಸ್ವರೂಪಗಳನ್ನು ಪಡೆದುಕೊಂಡು ಇದೀಗ ಬನಹಟ್ಟಿ ಬೂದಿ ಮುಚ್ಚಿದ ಕೆಂಡಂತಾಗಿದೆ.
ಅಹಿತಕರ ಘಟನೆಗಳನ್ನು ಮನಗಂಡು ಇಲಾಖೆ ಈ ನಿರ್ಧಾರಕ್ಕೆ ಮುಂದಾಗಿದೆ.
ಎರಡು ದಿನ ನಿಷೇದಾಜ್ಞೆ ಜಾರಿ
ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಫೆಬ್ರುವರಿ 9 ಮಧ್ಯಾಹ್ನ 12 ಗಂಟೆಂದ ಫೆ.11 ಬೆಳಿಗ್ಗೆ 6 ಗಂಟೆವರೆಗೆ ಎರಡು ದಿನಗಳ ಕಾಲ ಬನಹಟ್ಟಿ ನಗರದಲ್ಲಿ ನಿಷೇದಾಜ್ಞೆಯನ್ನು ಜಾರಿಗೊಳಿಸಲಾಗಿದೆ.
ಬನಹಟ್ಟಿಯಲ್ಲಿ ಮಂಗಳವಾರ ಖಾಸಗಿ ಶಾಲಾ ಶಿಕ್ಷಕನೋರ್ವನ ಮೇಲೆ ನಡೆದ ಹಲ್ಲೆ ಖಂಡಿಸಿ ಬುಧವಾರ ಹಿಂದು ಸಂಘಟನೆಗಳಿಂದ ಬನಹಟ್ಟಿ ಬಂದ್ ಘೋಷಿಸಿದ್ದ ಪರಿಣಾಮ ಸಂಪೂರ್ಣ ಯಶಸ್ವಿಯಾಗಲು ಕಾರಣವಾಗಿತ್ತು.
ಬೆಳಿಗ್ಗೆಯಿಂದಲೇ ಪಟ್ಟಣದಾದ್ಯಂತ ಜನತೆ ಸ್ವಯಂಪ್ರೇರಿತವಾಗಿ ಅಂಗಡಿ-ಮುಗ್ಗಟ್ಟುಗಳನ್ನು ಬಂದ್ ಮಾಡಿ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದರು. ಸರ್ಕಾರಿ ಹಾಗು ಸಹಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದರೆ, ಬೆಳಿಗ್ಗೆ ಮರ್ನಾಲ್ಕು ಗಂಟೆ ಮಾತ್ರ ರಾಜ್ಯ ಹೆದ್ದಾರಿಯಲ್ಲಿ ಸಂಚಾರಕ್ಕೆ ತೊಂದರೆಯಾಗಿ ನಂತರ ಬಸ್ ಸೇರಿದಂತೆ ಎಲ್ಲ ವಾಹನಗಳಿಗೆ ಮುಕ್ತವಾಗಿ ಸಂಚರಿಸಲು ಅವಕಾಶ ಕಲ್ಪಿಸಲಾಗಿತ್ತು.