ಕಡೂರು (ಡಿ.24) :ಮಾಜಿ ಶಾಸಕ ವೈಎಸ್ವಿ ದತ್ತ ಅವರಿಗೆ ಜನವರಿ 9ರೊಳಗೆ ಮರಳಿ ಜೆಡಿಎಸ್ ಪಕ್ಷಕ್ಕೆ ಬರಲು ಮನವಿ ಮಾಡಲಿದ್ದು. ಬಾರದೇ ಇದ್ದಲ್ಲಿ ಪಕ್ಷದಿಂದ ಮುಂದಿನ ನಡೆಯನ್ನು ಪ್ರಕಟಿಸಲಾಗುವುದು ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು.
ವೈಎಸ್ವಿ ದತ್ತ ಎಂದರೆ ಅವರೊಬ್ಬ ಜನಪ್ರಿಯ ನಾಯಕರು. ಅದರಲ್ಲೂ ದೇವೇಗೌಡರ ಮಾನಸ ಪುತ್ರರೆಂದು ರಾಜ್ಯದಲ್ಲಿ ಬಿಂಬಿತರಾಗಿದ್ದಾರೆ. ಅವರು ಈಗ ಕಾಂಗ್ರೆಸ್ ಸೇರ್ಪಡೆ ಆಗುವುದಾಗಿ ಹೇಳಿಕೊಂಡಿದ್ದು, ಕ್ಷೇತ್ರದ ಯಾರೋದೋ ಮಾತು ಕೇಳಿ ಅವರು ಈ ನಿರ್ಧಾರ ಮಾಡಿದ್ದಾರೆ ಎಂಬ ಮಾಹಿತಿ ಇದೆ. ಅವರು ಮನಸ್ಸು ಪರಿವರ್ತನೆ ಮಾಡಿಕೊಂಡು ಮರಳಿ ಜೆಡಿಎಸ್ಗೆ ಜ.9ರೊಳಗೆ ಬಂದರೆ ಅವರನ್ನು ಸ್ವಾಗತಿಸುತ್ತೇವೆ ಎಂದು ಪಟ್ಟಣದ ನಂದಿ ಕ್ರೀಡಾ ಕಬ್್ಲನಲ್ಲಿ ಶುಕ್ರವಾರ ನಡೆದ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಪ್ರಜ್ವಲ್ ರೇವಣ್ಣ.
ದತ್ತ ಅವರು ತೆಗೆದುಕೊಂಡಿರುವ ನಿರ್ಧಾರ ಸರಿಯಾಗಿಲ್ಲ. ದಾರಿ ತಪ್ಪಿಸುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ. ಜೆಡಿಎಸ್ನ ರಾಜ್ಯ ಮುಖಂಡರು ಅವರನ್ನು ಕರೆಸಿ ಮಾತನಾಡಿದ್ದು ಆರ್ಥಿಕವಾಗಿ ಶಕ್ತಿ ತುಂಬಿ ಮುಂದೆ ನಿಮ್ಮನ್ನು ಗೆಲ್ಲಿಸುತ್ತೇವೆ. ಇಲ್ಲದೇ ಹೋದಲ್ಲಿ ಎಂಎಲ್ಸಿ ಮಾಡುವ ಭರವಸೆ ನೀಡಿದ್ದರು. ಕಾಂಗ್ರೆಸ್ನಲ್ಲಿ ಅವರಿಗೆ ಟಿಕೆಟ್ ನೀಡುವುದಿಲ್ಲ ಎಂದರು.
ಜ.9 ರ ನಂತರ ಕಡೂರು ವಿಧಾನ ಸಭಾ ಕ್ಷೇತ್ರದಲ್ಲಿ ಮಿಂಚಿನ ರಾಜಕೀಯ ಮಿಂಚಿನ ಸಂಚಾರ ನಡೆಯಲಿದ್ದು ದತ್ತ ಬಂದರೆ ಸ್ವಾಗತ,ಬಾರದಿದ್ದರೆ ಕಾರ್ಯಕರ್ತರು ಹೇಳುವ ವ್ಯಕ್ತಿಯನ್ನೇ ಆಭ್ಯರ್ಥಿಯನ್ನಾಗಿ ಮಾಡಿ ಕ್ಯಾಂಪೇನ್ ಮಾಡಿ ಅವರ ಗೆಲುವಿಗೆ ಶ್ರಮಿಸುತ್ತೇನೆ . ದತ್ತ ಎಂದರೆ ದೇವೇಗೌಡರು ಬೆಳೆಸಿದ ಗಿಡ ಎಂಬ ಮನೋಭಾವನೆಯಿಂದ ಕ್ಷೇತ್ರದ ಕಾರ್ಯಕರ್ತರು ಹಾಗೂ ಜೆಡಿಎಸ್ ಮುಖಂಡರ ಪರವಾಗಿ ಮನವಿ ಮಾಡಿದ್ದೇವೆ ಅವರು ಬರುತ್ತಾರೆಂಬ ನಿರೀಕ್ಷೆಯಿದೆ. ಎಂದರು.
ತಾವೇ ಕ್ಷೇತ್ರದಲ್ಲಿ ಸಂಚರಿಸಿ ಹೋಬಳಿ ಮಟ್ಟದಿಂದಲೇ ಕಾರ್ಯಕರ್ತರ ಮನಗೆದ್ದು ಹೋರಾಟ ಮಾಡುತ್ತೇನೆ ಎಂದು ಹೇಳಿದರು. ಜೆಡಿಎಸ್ ಕಡೂರು ಕ್ಷೇತ್ರದಲ್ಲಿ ಸದೃಢವಾಗಿದೆ ಯಾರೂ ಜೆಡಿಎಸ್ ಪಕ್ಷವನ್ನು ಕಡೆಗಣಿಸಲು ಸಾಧ್ಯವಿಲ್ಲ.ಕಾಂಗ್ರೆಸ್,ಬಿಜೆಪಿ ಮತ್ತಿತರ ಪಕ್ಷದಿಂದ ಬರುವವರಿಗೆ ಜೆಡಿಎಸ್ ಬಾಗಿಲು ಸದಾ ತೆರೆದಿದೆ.ಅದರೆ ಕಾರ್ಯಕರ್ತರಾಗಿಯೇ ಬರಬೇಕು ಟಿಕೆಟ್ ಆಕಾಂಕ್ಷಿಗಳಾಗಿ ಬೇಡ ಎಂದರು.
ಜ.9 ರ ನಂತರ ಕ್ಷೇತ್ರದ ಪ್ರತಿ ಹೋಬಳಿಗಳಿಗೆ ತೆರಳಿ ಅಲ್ಲಿನ ಕಾರ್ಯಕರ್ತರನ್ನು ಭೇಟಿ ಮಾಡುವುದಾಗಿ ತಿಳಿಸಿದರು. ಸಭೆಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಮಹೇಶ್ವರಪ್ಪ ಅವರಿಗೆ ಕೂಡಲೆ ಕಡೂರು -ಬೀರೂರು ಪಟ್ಟಣದಲ್ಲಿ ಜೆಡಿಎಸ್ ಕಚೇರಿ ತೆರೆಯಲು ಸೂಚಿಸಿದರು. ಉಳಿದ ಹಣವನ್ನು ಇತರೆ ಸಮುದಾಯಗಳ ಭವನಗಳಿಗೆ ನೀಡಲಿದ್ದು ಅವುಗಳ ಪಟ್ಟಿತಯಾರಿಸಲು ಮಹೇಶ್ವರಪ್ಪ ಅವರಿಗೆ ಸೂಚಿಸಿದರು.
ಸಭೆಯಲ್ಲಿ ಚೇತನ್ ಕೆಂಪರಾಜು ಅವರ ಬಗ್ಗೆ ಕೆಲ ಕಾರ್ಯಕರ್ತರು ಪ್ರಸ್ತಾಪಿಸಿದಾಗ ಅವರು ಮೊದಲು ಪಕ್ಷ ಸೇರ್ಪಡೆಯಾಗಲಿ ನಂತರ ಕಾರ್ಯಕರ್ತರ ಅಭಿಪ್ರಾಯ ಪಡೆದು ಮುಂದಿನ ಬೆಳವಣಿಗೆಗಳ ಬಗ್ಗೆ ಚರ್ಚಿಸೋಣ.ಜಿಪಂ ಮಾಜಿ ಸದಸ್ಯ ಕೆ.ಆರ್.ಮಹೇಶ್ ಒಡೆಯರಿಗೂ ಇದು ಅನ್ವಯಿಸುತ್ತದೆ ಎಂದರು.
ಇದೇ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಮಹೇಶ್ವರಪ್ಪ, ಬೀರೂರು ಬಿ.ಪಿ.ನಾಗರಾಜು, ಬಿ.ಟಿ.ಗಂಗಾಧರನಾಯ್ಕ,ಆನಂದದನಾಯ್ಕ, ಸೋನಾಲ್ ಗೌಡ, ಪ್ರೇಮಕುಮಾರ್,ಮರುಗುದ್ದಿ ಮನು,ಪಾಪಣ್ಣ, ಹೇಮಂತ್,ಕೆ.ಬಿದರೆ ಜಗದೀಶ್, ಮತ್ತು ಕಾರ್ಯಕರ್ತರು ಇದ್ದರು.