ಹುಬ್ಬಳ್ಳಿಯಿಂದ ಮೂವತೈದು ಕಿ.ಮೀ. ಹಾಗೂ ಗದಗದಿಂದ ಇಪ್ಪತೈದು ಕಿ.ಮೀ. ದೂರದಲ್ಲಿ ಕಾಣಸಿಗುವ ಅಣ್ಣಿಗೇರಿ ಇತಿಹಾಸಪ್ರಸಿದ್ಧ ಕೇಂದ್ರ. ಬಾದಾಮಿ ಚಾಲುಕ್ಯ, ರಾಷ್ಟ್ರಕೂಟ, ಕಲ್ಯಾಣ ಚಾಲುಕ್ಯ, ಹೊಯ್ಸಳ, ಯಾದವ ಮೊದಲಾದ ಅರಸರ ಆಳ್ವಿಕೆಗೆ ಈ ‘ತಿರುಳ್ಗನ್ನಡ’ದ ನಾಡು ಸಾಕ್ಷಿಯಾಗಿದೆ. ಇಲ್ಲಿನ ಅಮೃತೇಶ್ವರ ದೇಗುಲ ಕಲ್ಯಾಣ ಚಾಲುಕ್ಯರ ಆಳ್ವಿಕೆಯ ಕಾಲದಲ್ಲಿ (ಹತ್ತನೆಯ ಶತಮಾನದಲ್ಲಿ) ನಿರ್ಮಾಣಗೊಂಡಿರಬಹುದಾದ ಕಪ್ಪುಶಿಲೆಯ ಕಟ್ಟಡ. ಅನೇಕ ಶಾಸನಗಳಲ್ಲಿ ಈ ದೇವಾಲಯಕ್ಕೆ ವಿವಿಧ ಕಾಲಗಳಲ್ಲಿ ಹೊಯ್ಸಳ ಅಧಿಕಾರಿಗಳು ದತ್ತಿನೀಡಿದ ವಿವರಗಳಿದ್ದು ದೇಗುಲವು ಹೊಯ್ಸಳಕಾಲದ (12ನೇ ಶತಮಾನ) ನಿರ್ಮಾಣವಿರಬಹುದೆಂಬ ಅಭಿಪ್ರಾಯವೂ ಇದೆ.
ಕಲಚೂರಿ ವಂಶದ ದೊರೆ ಬಿಜ್ಜಳನ ಹಾಗೂ ಚಾಲುಕ್ಯ ದೊರೆ ನಾಲ್ಕನೇ ಸೋಮೇಶ್ವರನ ರಾಜಧಾನಿಯಾಗಿಯೂ ಮತ್ತು ಹೊಯ್ಸಳ ದೊರೆ ವೀರ ಬಲ್ಲಾಳನ ಉಪರಾಜಧಾನಿಯಾಗಿಯೂ ಅಣ್ಣಿಗೇರಿ ಪ್ರಸಿದ್ಧಿ ಪಡೆದಿತ್ತು. ಪ್ರಾಚೀನ ಶಾಸನಗಳಲ್ಲಿ ದಕ್ಷಿಣದ ವಾರಣಾಸಿ ಎಂದೇ ಈ ಊರನ್ನು ಉಲ್ಲೇಖಿಸಲಾಗಿದೆ. ಆದರೆ ಈಗಿನ ಸ್ಥಿತಿಯನ್ನು ನೋಡಿದರೆ ಈ ಮಾತನ್ನು ನಂಬುವುದು ಕಷ್ಟ. ಇಲ್ಲೊಂದು ಸುಂದರ ಅಮೃತೇಶ್ವರ ದೇವಾಲಯವಿರುವುದು ಹೆಚ್ಚಿನವರಿಗೆ ತಿಳಿಯದ ವಿಷಯ.
ಅಣ್ಣಿಗೇರಿಯೊಳಗೆ ತಿರುವು ಪಡೆದು ಕಿರಿದಾದ ಅಂಕುಡೊಂಕಾಗಿರುವ ರಸ್ತೆಯಲ್ಲಿ ಊರೊಳಗೆ ಒಂದು ಕಿಮಿ ತೆರಳಿದರೆ ಈ ದೇವಾಲಯ ಸಿಗುವುದು. ದೇವಾಲಯವನ್ನು ರಾಷ್ಟ್ರೀಯ ಸ್ಮಾರಕವಾಗಿ ಘೋಷಿಸಲಾಗಿರುವುದರಿಂದ ಅಣ್ಣಿಗೇರಿ ಬೆಳೆದರೂ ದೇವಾಲಯದ ಪ್ರಾಂಗಣ ಒತ್ತುವರಿಯಿಂದ ಮುಕ್ತವಾಗಿದೆ. ಕಪ್ಪು ಕಲ್ಲಿನಿಂದ ನಿರ್ಮಿಸಲಾಗಿರುವ ಈ ದೇವಾಲಯದ ಛಾವಣಿ ೭೬ ಕಂಬಗಳ ಅಧಾರದಲ್ಲಿ ನಿಂತಿದೆ. ದೇವಾಲಯದ ಪ್ರಾಂಗಣದೊಳಗೆ ಪ್ರವೇಶಿಸಲು ಅಕ್ಕ ಪಕ್ಕದಲ್ಲೇ ೨ ದ್ವಾರಗಳಿವೆ. ಒಂದು ದ್ವಾರದ ಪ್ರವೇಶದಲ್ಲಿರುವ ಜಗುಲಿಯಲ್ಲಿ ೨ ಕಲ್ಲಿನ ಕಂಬಗಳನ್ನಿರಿಸಲಾಗಿರುವುದರಿಂದ ಬಗ್ಗಿಕೊಂಡೇ ಒಳಗೆ ಪ್ರವೇಶಿಸಬೇಕು. ಪ್ರವೇಶದ್ವಾರದ ಹೊರಗಿನಿಂದಲೇ ದೇವಾಲಯದ ಭವ್ಯಕಟ್ಟಡವು ಕಣ್ಸೆಳೆಯುತ್ತದೆ. ಪ್ರವೇಶದ್ವಾರದಲ್ಲೇ ಅಡ್ಡಲಾಗಿ ಕಲ್ಲಿನ ದೊಡ್ಡಕಂಬವೊಂದನ್ನು ಇರಿಸಿ ಜನರು ಮೈಬಗ್ಗಿಸಿ ಹೋಗುವಂತಹ ಅನಿವಾರ್ಯವನ್ನು ಅದೇಕೆ ಸೃಷ್ಟಿಸಲಾಗಿದೆಯೋ ತಿಳಿಯದು. ಪ್ರಾಂಗಣದೊಳಗೆ ಪ್ರವೇಶಿಸಿದೊಡನೆ ಬೆರಗಾದೆ. ಇಂತಹ ಊರಿನಲ್ಲೂ ಇಷ್ಟು ಸುಂದರ ದೇವಾಲಯ ಅಡಗಿರುವುದನ್ನು ಕಂಡು ಆಶ್ಚರ್ಯವಾಯಿತು. ಅಲ್ಲೇ ಮುಂದೆ ಒಳಗುಡಿಗೆ ಸಾಗುವಲ್ಲಿ ಅರ್ಧಮಂಟಪವೊಂದು ಎದುರಾಗುತ್ತದೆ. ಒರಗಲು ಕಕ್ಷಾಸನ, ಕಲ್ಲುಚಪ್ಪಡಿಗಳನ್ನು ಇಳಿಜಾರಾಗಿ ವಿನ್ಯಾಸಗೊಳಿಸಿರುವ ಮುಂದಿನ ಸೂರು, ಬಾಗಿಲ ಚೌಕಟ್ಟಿನ ಸೂಕ್ಷ್ಮಕೆತ್ತನೆ ಎಲ್ಲವೂ ಸೊಗಸಾಗಿವೆ.
ಒಳಗುಡಿಯ ಭುವನೇಶ್ವರಿ, ಕಂಬಗಳ ಕೆತ್ತನೆ ಪೂರ್ವಕಾಲದ ಶಿಲ್ಪಪ್ರಾವೀಣ್ಯವನ್ನು ತೋರ್ಪಡಿಸುವಂತಿವೆ. ಮುಖ್ಯಗರ್ಭಗುಡಿಯಲ್ಲಿ ಎರಡು ಅಡಿಗಳಷ್ಟು ಎತ್ತರದ ಅಮೃತೇಶ್ವರಲಿಂಗವಿದೆ. ಅದಕ್ಕೆ ಅಭಿಮುಖವಾಗಿ ಇನ್ನೊಂದು ದಿಕ್ಕಿನಲ್ಲಿ ನಂದಿಯ ವಿಗ್ರಹ. ಇನ್ನೊಂದು ಬದಿಗೆ ಪಾರ್ವತೀದೇವಿಯ ಗುಡಿ.
ಉತ್ತರ ಕರ್ನಾಟಕದ ಅನೇಕ ದೇವಾಲಯಗಳ ಮುಖ್ಯ ಆಕರ್ಷಣೆ ಅವುಗಳ ಬಾಗಿಲವಾಡದ ಸೂಕ್ಷ್ಮಕೆತ್ತನೆಯೇ ಎಂದರೆ ಅತಿಶಯೋಕ್ತಿಯಲ್ಲ. ಅಣ್ಣಿಗೇರಿ ದೇವಾಲಯವೂ ಅದಕ್ಕೆ ಹೊರತಲ್ಲ. ಒಂಬತ್ತು ಪಟ್ಟಿಕೆಗಳಿರುವ ದ್ವಾರಪಟ್ಟಕದ ಸೊಬಗನ್ನು ಎಷ್ಟು ವರ್ಣಿಸಿದರೂ ಸಾಲದು. ಒಂದೊಂದು ಸಾಲಿನಲ್ಲಿ ಅನುಕ್ರಮವಾಗಿ ಸಿಂಹಮುಖಗಳು, ನರ್ತಕರು, ನಾಗದಂಪತಿಗಳು, ಹೂಬಳ್ಳಿಗಳು, ನೃತ್ಯಭಂಗಿಯ ಪುರುಷವಿಗ್ರಹಗಳು, ಬಳ್ಳಿಕಬ್ಬುಗಳ ವಿನ್ಯಾಸವಿರುವ ವಲಯಗಳೊಳಗೆ ವಿವಿಧ ಮಾನವ ಶಿಲ್ಪಗಳು- ಒಂದಕ್ಕಿಂತ ಒಂದು ಸೂಕ್ಷ್ಮವಾಗಿ ಕೆತ್ತಿರುವ ಬಗೆ ಅಚ್ಚರಿತರುತ್ತದೆ. ಒಳಹೊರಗೆ ಉಬ್ಬಿದಂತೆ, ಅಲ್ಲಲ್ಲಿ ಟೊಳ್ಳುಗಳನ್ನು ಸೃಷ್ಟಿಸಿ ಮೂರು ಆಯಾಮಗಳನ್ನು ಉಂಟುಮಾಡಿರುವ ಬಗೆ ಶಿಲ್ಪಕಲಾಪ್ರತಿಭೆಯ ಪರಾಕಾಷ್ಠೆಯೇ ನಿಜ.
ಈ ಬಾಗಿಲವಾಡಗಳನ್ನು ನೋಡುವುದಕ್ಕಾದರೂ ನೀವು ಅಣ್ಣಿಗೇರಿಗೆ ಬರಲೇಬೇಕು. ಒಳ ಗುಡಿಯ ಮಂಟಪಗಳು ಬಹು ವಿಶಾಲವಾಗಿವೆ. ಅಂತೆಯೇ ಗುಡಿಯ ಹೊರಾವರಣವೂ ವಿಸ್ತಾರವಾಗಿದ್ದು ಕಟ್ಟಡದ ಅಂದಕ್ಕೆ ಪೂರಕವಾಗಿದೆ. ದೇವಾಲಯದ ಸುತ್ತ ಪ್ರದಕ್ಷಿಣೆ ಬರುವುದಾದರೆ, ಅಮೃತೇಶ್ವರನಿರುವ ಗರ್ಭಗುಡಿಯ ಮೇಲುಭಾಗದಲ್ಲಿ ಶಿಖರವನ್ನು ಕಾಣುತ್ತೀರಿ. ನಾಲ್ಕು ಸ್ತರಗಳ ವಿನ್ಯಾಸವುಳ್ಳ ಶಿಖರರಚನೆ. ಸಿಂಹಮುಖಗಳು, ಅವುಗಳೊಳಗೆ ಯಕ್ಷ, ನರ್ತಕ ಮೊದಲಾದವರು, ಅಲ್ಲಲ್ಲಿ ಆನೆ, ಕಪಿ, ಹಂಸ ಮೊದಲಾದ ಕಿರುಶಿಲ್ಪಗಳು, ಪ್ರತಿಸ್ತರದ ನಡುವೆ ಕೀರ್ತಿಮುಖದೊಳಗೆ ಕಿರುಗೋಪುರಗಳು, ಸ್ತರದ ಹೊರಅಂಚಿನ ಕಳಶ- ಎಲ್ಲವೂ ಸಾವಿರವರ್ಷಗಳ ಕಾಲ ಬಿಸಿಲಿಗೆ ಮೈಯೊಡ್ಡಿ ನಿಂತಿದ್ದರೂ ತಮ್ಮ ಕಲಾಪ್ರೌಢಿಮೆಯನ್ನು ಮೆರೆಸುವಂತೆ ಉಳಿದುಬಂದಿರುವುದು ಸಂತಸದ ವಿಷಯ.
ಮೇಲಿನ ಸ್ತೂಪಿಯನ್ನು ಗಾರೆಯಿಂದ ಪುನರ್ನಿರ್ಮಿಸಿದೆ. ಗರ್ಭಗುಡಿಯ ಮುಂದಿನ ಅಂತರಾಳ, ನವರಂಗ, ಮುಖಮಂಟಪವೇ ಮೊದಲಾದವುಗಳ ಹೊರಗೋಡೆಗಳ ಮೇಲೆ ಹೆಚ್ಚಿನ ಶಿಲ್ಪಗಳಿಲ್ಲದೆ ಸಪಾಟಾಗಿದ್ದರೂ ಮುಖ್ಯಕಂಬಗಳ ನಡುವೆ ಕಿರುಗಂಬಗಳನ್ನು ರೂಪಿಸಿ ಅವುಗಳ ಮೇಲಕ್ಕೆ ಹೂಬಳ್ಳಿಗಳ ವಿನ್ಯಾಸವನ್ನು ರಚಿಸಿರುವ ಬಗೆ ಅಂದವಾಗಿದೆ. ಸುತ್ತುಕಟ್ಟಡದ ಮೇಲಂಚಿನ ಕೈಪಿಡಿಯ ಹೊರಅಂಚಿನಲ್ಲಿ ಮೂರು ಸಾಲುಗಳ ಪಟ್ಟಿಕೆಗಳಿರುವಂತೆ ಜೋಡಣೆಯಿದ್ದು ಪ್ರತಿಸಾಲಿನಲ್ಲಿ ಕಟ್ಟಡದುದ್ದಕ್ಕೂ ಶಿಲ್ಪಗಳ ಕೆತ್ತನೆಯಿದ್ದಿರಬೇಕು. ಈಗ ಅಳಿದುಳಿದ ಹಲವನ್ನು ಗಮನಿಸಿದರೆ, ಕೆಳಸಾಲಿನಲ್ಲಿ ಆನೆ, ಅದರ ಮೇಲಕ್ಕೆ ಹಂಸ, ಹೊರಚಾಚಿಕೊಂಡಂತಿರುವ ಸೂರಿನ ಅಂಚು, ಎಲ್ಲಕ್ಕೂ ಮೇಲೆ ಕೈಪಿಡಿಯಲ್ಲಿ ಸಿಂಹಮುಖಗಳ ಆವರಣಗಳೊಳಗೆ ದೇವಯಕ್ಷಗಂಧರ್ವಾದಿಗಳು- ಈ ಬಗೆಯ ವಿನ್ಯಾಸವನ್ನು ಗುರುತಿಸಬಹುದು.
ಕಲ್ಯಾಣ ಚಾಲುಕ್ಯರ ವಾಸ್ತುಶೈಲಿಯನ್ನು ಹೊಂದಿರುವ ಅಮೃತೇಶ್ವರ ದೇವಾಲಯದಲ್ಲಿ ೨ ಗೋಪುರಗಳಿವೆ. ಗರ್ಭಗುಡಿಯ ಗೋಪುರ, ಮುಖಮಂಟಪದ ಗೋಪುರಕ್ಕಿಂತ ಎತ್ತರವಿದ್ದು ಆಕರ್ಷಕ ಶಿಲ್ಪಕಲೆಯನ್ನು ಹೊಂದಿದೆ. ಇಲ್ಲಿರುವ ನಂದಿ, ಶಿವನ ಮುಂದೆನೋ ಇದೆ ಆದರೆ ಸ್ವಲ್ಪ ದೂರದಲ್ಲಿದೆ. ಹೆಚ್ಚಿನ ಶಿವ ದೇವಾಲಯಗಳಲ್ಲಿ ಗರ್ಭಗುಡಿಯ ಹೊರಗೆ ನಂದಿ ಆಸೀನನಾಗಿರುತ್ತಾನೆ. ಆದರೆ ಇಲ್ಲಿ, ಗರ್ಭಗುಡಿಯ ಮತ್ತು ನಂದಿ ಆಸೀನನಾಗಿರುವ ಕೋಣೆಯ ಮಧ್ಯೆ ಮತ್ತೊಂದು ಕೋಣೆಯಿದ್ದು (ಅಂತರಾಳ), ದೇವಾಲಯದ ಪ್ರವೇಶ ದ್ವಾರವಿರುವುದೂ ಇದೇ ಕೋಣೆಗೆ. ದೇವಾಲಯಕ್ಕೆ ಒಳಬಂದಾಗ ಎಡಕ್ಕೆ ಗರ್ಭಗುಡಿಯಿದ್ದರೆ, ಬಲಕ್ಕೆ ಮತ್ತೊಂದು ವಿಶಾಲವಾದ ಕೋಣೆಯಿದ್ದು, ಇದರಲ್ಲಿ ನಂದಿ ಆಸೀನನಾಗಿದ್ದಾನೆ. ನಂದಿ ಆಸೀನನಾಗಿರುವ ಈ ಭಾಗ ದೇವಾಲಯದ ಮತ್ತೊಂದು ತುದಿ ಎನ್ನಬಹುದು. ದೇವಾಲಯದ ಒಂದು ತುದಿಯಲ್ಲಿ ಗರ್ಭಗುಡಿಯಲ್ಲಿರುವ ಶಿವಲಿಂಗದಿಂದ ಸುಮಾರು ೮೦-೧೦೦ ಅಡಿ ದೂರದಲ್ಲಿ ದೇವಾಲಯದ ಮತ್ತೊಂದು ತುದಿಯಲ್ಲಿ ನಂದಿ ಇರುವುದು. ನಂದಿ ಇರುವ ಕೋಣೆಯಲ್ಲಿ ದಿಕ್ಕಿಗೊಂದರಂತೆ ೪ ಬಾಗಿಲುಗಳಿವೆ. ಇವುಗಳಲ್ಲಿ ೩ನ್ನು ಮುಚ್ಚಲಾಗಿದೆ. ಪ್ರಾಂಗಣದೊಳಗೊಂದು ಗಣೇಶನ ದೇವಾಲಯವಿದೆ. ಸಣ್ಣ ಪುಷ್ಕರಿಣಿಯಿದೆ.
ಕೆಲವೆಡೆ ಮಿಥುನಶಿಲ್ಪಗಳೂ ನರ್ತಕನರ್ತಕಿಯರ ಬಿಂಬಗಳೂ ಹಾರುವ ಗಂಧರ್ವರ ಶಿಲ್ಪಗಳೂ ಇವೆ. ಮೇಲಂಚಿನಲ್ಲಿ ಒಂದೆಡೆ ದೊಡ್ಡ ಆಕಾರದ ಗಣಪತಿಯ ಭಗ್ನಶಿಲ್ಪವೊಂದಿರುವುದು ಅಚ್ಚರಿಮೂಡಿಸುತ್ತದೆ. ಗದಗ ಲಕ್ಕುಂಡಿ ಮೊದಲಾದ ಪ್ರಸಿದ್ಧ ಸ್ಥಳಗಳಿಗೆ ಭೇಟಿನೀಡುವವರು ಅಣ್ಣಿಗೇರಿಯನ್ನು ನೋಡಲು ಮರೆಯದಿರಿ.